ಬೇಟ್‍ಸನ್, ವಿಲಿಯಮ್
1861-1926. ಪ್ರಸಿದ್ಧ ತಳಿವಿಜ್ಞಾನಿ. ಇಂಗ್ಲೆಂಡಿನ ವಿಟ್ಟಿ ಎಂಬಲ್ಲಿ 1861 ಆಗಸ್ಟ್ 8 ರಂದು ಜನಿಸಿದ. ಪ್ರಾಂತೀಯ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ 1883ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಪ್ರಕೃತಿ ವಿಜ್ಞಾನದಲ್ಲಿ ಬಿ.ಎ. ಪದವಿ ಪಡೆದ. ಅನಂತರ ಪ್ರಾಣಿ ವಿಜ್ಞಾನ ಅಭ್ಯಸಿಸಿ ಭ್ರೂಣವಿಜ್ಞಾನದಲ್ಲಿ ವಿಶೇಷ ಪರಿಣತಿಗಳಿಂದ (1885-1910). ಜೀವಿಗಳ ಅನುವಂಶೀಯತೆಯನ್ನು ಅಧ್ಯಯನ ಮಾಡುವ ವಿಜ್ಞಾನ ವಿಭಾಗಕ್ಕೆ ಜೆನೆಟಿಕ್ಸ್ (ತಳಿ ವಿಜ್ಞಾನ) ಎಂದು ಹೆಸರು ಕೊಟ್ಟವನು ಇವನೇ.

	ಗ್ರಿಗೊರ್‍ಮೆಂಡಲನ ಅನುವಂಶೀಯತೆಯ ನಿಯಮಗಳ ಪ್ರತಿಪಾದನೆ 1900ರಲ್ಲಿ ಆದಾಗ ಬೇಟ್‍ಸನ್ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ತಳಿ ವಿಜ್ಞಾನ ಶಾಖೆ ಪ್ರಾರಂಭಿಸಿ ಅದರ ಮುಖ್ಯಸ್ಥನಾದ. ಅನುವಂಶೀಯತೆಯ ನಿಯಮಗಳು ಬಟಾಣಿ ಗಿಡಗಳಿಗೇ ಸೀಮಿತವಾಗಿರದೆ ಎಲ್ಲ ಜೀವಿಗಳಿಗೂ ಅನ್ವಯಿಸುತ್ತವೆ ಎಂದು ತಿಳಿಸಿದ. ಅನುವಂಶೀಯತೆಯ ಅಧ್ಯಯನ ಮಾಡುವುದರಿಂದ ಡಾರ್ವಿನ್ನನ ವಿಕಾಸವಾದವನ್ನು ಪುಷ್ಟೀಕರಿಸುವುದು ಸಾಧ್ಯ ಎಂಬುದನ್ನು ತನ್ನ ಸಂಶೋಧನೆಗಳಿಂದ ಸ್ಥಿರ ಪಡಿಸಲು ಯತ್ನಿಸಿದ. ಅನುವಂಶೀಯ ವಸ್ತುಗಳು ಆಕಾರರಹಿತ ವಸ್ತುಗಳ ಮೂಲಕ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹರಿಯುತ್ತವೆ ಎಂಬ ಕಲ್ಪನೆ 1900ರ ಮೊದಲಿಗಿತ್ತು. ಅನುವಂಶೀಯ ವಸ್ತು ಕಣರೂಪದಲ್ಲಿದ್ದು ಲಿಂಗಾಣುಗಳ ಮೂಲಕ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ವಹಿಸುತ್ತದೆ ಎಂದು ಬೇಟ್‍ಸನ್ ತೋರಿಸಿದ. ಮುಂದೆ ಈ ಕಣರೂಪಿ ವಸ್ತುಗಳನ್ನು ಜೀನ್ ಎಂದು ಹೆಸರಿಸಲಾಯಿತು. ವಿವಿಧ ಸಾಕುಪ್ರಾಣಿಗಳಲ್ಲಿ ಹಾಗೂ ಸಸ್ಯಗಳಲ್ಲಿ ಸಂಕರಗಳನ್ನು ನಡೆಸಿ (1900-10) ಮೆಂಡಲನ ನಿಯಮಗಳನ್ನು ಈ ಜೀವಿಗಳಿಗೆ ಅನ್ವಯಿಸುವ ಸಂದರ್ಭದಲ್ಲಿ ಕೆಲವು ಜೀನ್‍ಗಳು ಮೆಂಡಲನ ನಿಯಮಗಳಿಗೆ ವ್ಯತಿರಿಕ್ತ ನಡವಳಿಕೆಯನ್ನು ತೋರಿಸುತ್ತವೆ ಎಂಬುದನ್ನು ಕಂಡಿಹಿಡಿದ. ಈ ಭಿನ್ನ ನಡವಳಿಕೆಗೆ ಜೀನುಗಳ ಪಾರಸ್ಪರಿಕ ಕ್ರಿಯೆ ಹಾಗೂ ಪ್ರಬಲತೆ-ದುರ್ಬಲತೆ ಸಂಬಂಧದಲ್ಲಿ ಲೋಪವಿರುವುದೇ ಕಾರಣವೆಂದೂ ಮಾನವನ ಕೆಲವು ಅನುವಂಶೀಯ ರೋಗಗಳು ಮೆಂಡಲನ ನಿಯಮಗಳಂತೆ ನಡೆದುಕೊಳ್ಳುತ್ತವೆ ಎಂದು ತೋರಿಸಿದ.

	ಬೇಟ್‍ಸನ್ನನ ಬಲುಮುಖ್ಯ ಶೋಧನೆ ಎಂದರೆ ಸಂಲಗ್ನತೆ. ಇದರ ಪ್ರಕಾರ ಒಂದು ಜೀವಿಯಲ್ಲಿ ಹಲವಾರು ಜೀನುಗಳಿದ್ದು ಇವು ಗುಂಪಾಗಿರುತ್ತವೆ. ಜೀನ್ ಗುಂಪುಗಳ ಸಂಖ್ಯೆ ಆ ಜೀವಿಯ ಕ್ರೋಮೊಸೋಮುಗಳ ಸಂಖ್ಯೆಗೆ ಸಮವಾಗಿರುತ್ತವೆ. ಅಂದರೆ ಜೀನುಗಳು ಕ್ರೋಮೊಸೋಮುಗಳಲ್ಲಿ ಜೋಡಿಸಲ್ಪಟ್ಟಿರುತ್ತವೆ. ಒಂದು ಕ್ರೋಮೊಸೋಮಿನಲ್ಲಿ ಹಲವಾರು ಜೀನುಗಳಿದ್ದು ಇವು ಸರಳರೇಖೆಯ ಮಾದರಿಯಲ್ಲಿ ಜೋಡಿಸಲ್ಪಟ್ಟಿರುತ್ತದೆ ಎಂಬುದನ್ನು ಬೇಟ್‍ಸನ್ ತೋರಿಸಿದ. ಮುಂದೆ ಇದರಿಂದ ಅನುವಂಶೀಯತೆಯ ಕ್ರೋಮೊಸೋಮ್ ನಿಯಮ ಪ್ರತಿಪಾದಿತವಾಯಿತು.

	ಬೇಟ್‍ಸನ್ 1910ರಲ್ಲಿ ಇಂಗ್ಲೆಂಡಿನ ತೋಟಗಾರಿಕೆ ಸಂಸ್ಥೆಯೊಂದರ ನಿರ್ದೇಶಕನಾದ. 1914ರಲ್ಲಿ ಬ್ರಿಟಿಷ್ ವಿಜ್ಞಾನ ಸಂಘದ ಅಧ್ಯಕ್ಷನಾಗಿ ಆಯ್ಕೆಯಾದ. ಈತನ ಮುಖ್ಯ ಗ್ರಂಥಗಳು: ಮೆಟೀರಿಯಲ್ ಫಾರ್ ದಿ ಸ್ಟಡಿ ಆಫ್ ವೇರಿಯೇಷನ್ (1894); ಮೆಂಡಲ್ಸ್ ಪ್ರಿನ್ಸಿಪಾಲ್ಸ್ ಆಫ್ ಹೆರಿಡಿಟಿ, ಎ ಡಿಫೆನ್ಸ್ (1902); ಪ್ರಾಬ್ಲಮ್ ಆಫ್ ಜೆನೆಟಿಕ್ಸ್ (1913).

	1926 ಫೆಬ್ರವರಿ 8ರಂದು ಲಂಡನ್ನಿನ ಮರ್ಟನ್ ಎಂಬಲ್ಲಿ ಮೃತನಾದ.

(ಎಸ್.ಎನ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ